Kannada Article: ಹೊಸ ಯಥಾಕ್ರಮದತ್ತ ನಮ್ಮ ಬದುಕು


ಹೊಸ ಯಥಾಕ್ರಮದತ್ತ ನಮ್ಮ ಬದುಕು


ಕೊರೋನಾ ಸೋಂಕು ನಮ್ಮ ಜೀವನಕ್ಕೆ ಹಲವು ಪಾಠಗಳನ್ನು ಕಲಿಸುತ್ತಿದೆ, ಮಾತ್ರವಲ್ಲದೆ, ನಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತಿದೆ. ದೈಹಿಕ ಅಥವಾ ಸಾಮಾಜಿಕ ಅಂತರವನ್ನು ಕಾಪಾಡುವುದು, ನಾವು ವಾಸಿಸುವ ಮತ್ತು ನಡೆದಾಡುವ ಸ್ಥಳಗಳನ್ನು ಸ್ವಚ್ಚವಾಗಿಡುವುದು, ಮುಖಗವಸು ಧರಿಸುವುದು, ಆಗಾಗ ಕೈಗಳನ್ನು ಸ್ವಚ್ಚಗೊಳಿಸುವುದು, ಆರೋಗ್ಯಕರವಾದ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ ನಮ್ಮ ದೇಹವನ್ನು ಯಾವುದೇ ಸೋಂಕಿಗೆ ಒಳಗಾಗದಂತೆ ಕಾಪಾಡುವುದು, ಹೀಗೆ ಹತ್ತು ಹಲವು ಹೊಸ ಮಾರ್ಗಗಳನ್ನು ದಿನನಿತ್ಯ ಅನುಸರಿಸುವುದು ನಮ್ಮ ಹೊಸ ರೂಢಿಯಾಗಿದೆ. 

ಇವೆಲ್ಲಾ ಬಾಹ್ಯ ವಿಷಯಗಳಾದರೆ, ಆಂತರಿಕವಾಗಿ ನಾವು ಹೊಸ ವಿಷಯಗಳನ್ನು ಅರಿಯುವುದರ ಜೊತೆಗೆ ಒಂದು ರೀತಿಯ ಭಯದಿಂದ ದಿನಗಳನ್ನು ಕಳೆಯುವ ಪರಿಸ್ಥಿತಿಯಲ್ಲಿದ್ದೇವೆ. ಮನೆಯಿಂದ ಹೊರಗೆ ಕಾಲಿಡುವ ಮೊದಲೇ ಸುರಕ್ಷಿತವಾಗಿ ಮನೆಗೆ ಹೇಗೆ ಹಿಂತುರುಗುವುದೆAದು ಯೋಚಿಸುತ್ತೇವೆ. ಇವುಗಳೆಲ್ಲವೂ ಇನ್ನು ಹೊಸ ರೂಢಿಯಾಗಲಿವೆ.  ಆಂಗ್ಲ ಭಾಷೆಯಲ್ಲಿ ಇದನ್ನು ಎ ನ್ಯು ನೋರ್ಮಲ್ (A New Normalಎಂದು ಕರೆಯುತ್ತಾರೆ. 

ಈ ಹೊಸ ರೂಢಿಯು ನಮ್ಮಲ್ಲಿ ನವೀನ ರೀತಿಯ ವ್ಯಕ್ತಿತ್ವವನ್ನು ರೂಪಿಸುವಾಗ ಸಾಮಾನ್ಯವಾಗಿ ನಮ್ಮಲ್ಲಿ ಮಾನಸಿಕ ಗೊಂದಲಗಳು ಮೂಡಬಹುದು. ಯಾಕೆ ಹೀಗಾಯಿತು? ನಾವು ಯಾಕೆ ಈ ರೀತಿ ಸಮಾಜದಲ್ಲಿ ನಡೆಯಬೇಕು? ಆ ಮೊದಲಿನ ಜೀವನ ಶೈಲಿ ಯಾವಾಗ ಮರುಕಳಿಸಬಹುದು? ಇಂತಹ ಹಲವು ಸವಾಲುಗಳು ನಮ್ಮಲ್ಲಿ ಉದ್ಭವಿಸಿ ನಾವು ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳಬಹುದು.  ನಾವು ಇಂತಹ ಮನಕುಗ್ಗಿಸುವ ವಿಷಯಗಳಿಗೆ ಸಮಯಾವಕಾಶ ಕೊಡದೆ, ಈ ಪರಿಸ್ಥಿತಿಯಲ್ಲಿ ನಮ್ಮ ಮನಸ್ಸನ್ನು ಸಕಾರಾತ್ಮಕ ವಿಷಯಗಳ ಕಡೆ ಹಾಯಿಸಿದರೆ ಸೂಕ್ತ ಎಂದು ನನ್ನ ಭಾವನೆ. 

ಹಲವಾರು ಆಸ್ಪತ್ರೆಗಳಲ್ಲಿ ಹಾಗೂ ತಪಾಸಣಾ ಕೇಂದ್ರಗಳಲ್ಲಿ ವೈದ್ಯರು ಮತ್ತು ದಾದಿಯರು ಹಗಲಿರುಳೆನ್ನದೆ, ತಮ್ಮ ಜೀವ ಮತ್ತು ಕುಟುಂಬ ಲೆಕ್ಕಿಸದೆ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ದಿನನಿತ್ಯದ
ಆಹಾರ ಪದಾರ್ಥಗಳು ನಮಗೆ ಸೂಕ್ತ ಸಮಯದಲ್ಲಿ ಸಿಗಲು ಹಲವು ಜನ ರಸ್ತೆ ಬೀದಿಗಳಲ್ಲಿ ದುಡಿದರೆ, ಹಲವು ಉದಾರ ದಾನಿಗಳು ನೊಂದವರ, ನಿರಾಶ್ರಿತರ ಕಣ್ಣೀರ ಮುಸುಕಲ್ಲಿ ನಗುವೊಂದನ್ನು ಇರಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ, ಭಯ ಮತ್ತು ಆತಂಕದ ಪರಿಸ್ಥಿತಿಯಲ್ಲೂ ಎದೆಗುಂದದೆ ಶ್ರಮವಹಿಸುವರು ಅನೇಕರು. ಇಂತಹ ಸಕಾರಾತ್ಮಕ ವಿಷಯತ್ತ ಗಮನ ಹರಿಸಿ  ಕೃತಜ್ಞತಾ ಭಾವದಿಂದ ಈ ಹೊಸ ಯಥಾಕ್ರಮದಲ್ಲಿ ನಮ್ಮ ಬದುಕು ಸಾಗಲಿ... 


No comments:

Post a Comment